ದಂತಶಾಸ್ತ್ರ -
ಹಲ್ಲು, ವಸಡು ಮತ್ತು ಅವುಗಳಿಗೆ ಸಂಬಂಧಿಸಿದ ಅಂಗಗಳ ಆರೋಗ್ಯ ಸಂವರ್ಧನೆ ಹಾಗೂ ಸಂರಕ್ಷಣೆಗಳ ಕಡೆಗೆ ವಿಶೇಷ ಲಕ್ಷ್ಯವೀವ ಮತ್ತು ದಂತ ರೋಗಗಳು ಹಾಗೂ ಅವುಗಳ ಚಿಕಿತ್ಸೆಯನ್ನು ಅಭ್ಯಸಿಸುವ ವೈದ್ಯ ವಿಭಾಗ (ಡೆಂಟಿಸ್ಟ್ರಿ).   ಭಾರತದಲ್ಲಿ ದಂತ ರೋಗಗಳ ಅಧ್ಯಯನ, ಹಲ್ಲುಗಳ ಕೀಳುವಿಕೆಗೆ ಸಂಬಂಧಿಸಿದ ಶಸ್ತ್ರಕ್ರಿಯೆಗಳ ವಿವರಣೆ ಮುಂತಾದವು ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ದೊರೆಯುತ್ತವೆ.  ವೇದಕಾಲದಿಂದಲೇ ಭಾರತೀಯರಿಗೆ ಹಲ್ಲು ಬಾಯಿ ಆರೋಗ್ಯದ ವಿಚಾರ ಸಾಕಷ್ಟು ತಿಳಿವಳಿಕೆ ಇತ್ತೆಂದು ಇದರಿಂದ ಊಹಿಸಬಹುದು.  ಕ್ರಿ. ಪೂ. 600 ರ ಸುಮಾರಿಗೆ ಕಾಶಿ ವಿದ್ಯಾಪೀಠದಲ್ಲಿ ಸುಶ್ರುತ ದಂತ ಶಾಸ್ತ್ರವನ್ನು ಕಲಿಸುತ್ತಿದ್ದುದು ತಿಳಿದುಬಂದಿದೆ.  ನಲಂದ ತಕ್ಷಶಿಲೆಗಳಲ್ಲಿಯೂ ಇದರ ಅಧ್ಯಯನ ನಡೆದಿತ್ತು. ಕ್ರಿ. ಪೂ. 450-500 ರಲ್ಲಿ ಈ ವಿಶ್ವವಿದ್ಯಾಲಯಗಳು ಹೂಣರ ದಾಳಿಗಳಿಂದ ನಾಶಗೊಂಡವು.  ಮುಂದೆ ಬಂದ ಬೌದ್ಧರ ಹಾಗೂ ಮೊಗಲರ ಕಾಲದಲ್ಲಿ ಈ ವಿಶೇಷ ವಿದ್ಯೆ ಅಭಿವರ್ಧಿಸಲಿಲ್ಲ.

ಮನುಷ್ಯನ ಹಲ್ಲುಗಳು ಮುಖ್ಯವಾಗಿ ಈ ಮುಂದಿನ ಕಾರ್ಯಗಳನ್ನು ಎಸಗುತ್ತವೆ : ಆಹಾರವನ್ನು ಕಡಿಯುವುದು, ಮುಖಕ್ಕೆ ಅಂದವನ್ನು ಕೊಡುವುದು; ಮಾತು ಸ್ಪಷ್ಟ ಮತ್ತು ಮೊನಚಾಗುವಂತೆ ಮಾಡುವುದು; ಆಹಾರ ಪಚನಕಾರ್ಯದಲ್ಲಿ ನೆರವಾಗುವುದು, ಇತ್ಯಾದಿ.  ಹಾಲು ಹಲ್ಲುಗಳು ಮಕ್ಕಳ ದವಡೆಯ ಬೆಳೆವಣಿಗೆಗೆ ನೆರವಾಗುತ್ತವೆ. ಪ್ರಾಣಿಗಳಿಗೆ ಅವುಗಳ ಬೇಟೆಯನ್ನು ಹಿಡಿಯುವುದರಲ್ಲಿ ಕೂಡ ಆಯುಧಗಳಂತೆ ವರ್ತಿಸುತ್ತವೆ.

ಮನುಷ್ಯನ ಹಲ್ಲುಗಳಲ್ಲಿ ನಾಲ್ಕು ವಿಧಗಳಿವೆ; ಕಡಿಯುವ ಹಲ್ಲು, ಕೋರೆಹಲ್ಲು, ದವಡೆÀ  ಹಲ್ಲು.  ಒಂದೊಂದು ಹಲ್ಲಿನಲ್ಲೂ ಎರಡು ವಿಭಾಗಗಳಿವೆ : ಶಿರ, ಬೇರು, ದಂತಶಿರ ಅಥವಾ ಶಿರೋಭಾಗ ವಸಡುಗಳಿಂದ ಹೊರಕ್ಕೆ ಅಂಟಿಕೊಂಡಿರುವ (ಆದ್ದರಿಂದ ನಮಗೆ ಕಾಣುವ) ಭಾಗ.  ದಂತವಜ್ರ (ಎನೇಮಲ್, ಹಲ್ಲುಗಾಜು) ಎಂಬ ಗಟ್ಟಿ ಮತ್ತು ಬಿರುಸು ಕ್ಯಾಲ್ಸಿಯಮ್ ಲವಣ ಪದಾರ್ಥ ಇದನ್ನು ಆವರಿಸಿದೆ.  ದೇಹದ ಅತ್ಯಂತ ಗಟ್ಟಿ ಅಂಗವಿದು.  ಒಮ್ಮೆ ನಷ್ಟವಾದಲ್ಲಿ ಯಾ ರೋಗಪೀಡಿತವಾದಲ್ಲಿ ಮತ್ತೆ ಇದು ಬೆಳೆಯಲಾರದು.  ದಂತಮೂಲ ಅಥವಾ ಬೇರು ಭಾಗ ವಸಡಿನೊಳಗೆ ಹುದುಗಿಕೊಂಡಿದ್ದು ತಳದಲ್ಲಿ ದವಡೆಯ ಎಲುಬಿಗೆ ಜೋಡಣೆಗೊಂಡಿದೆ.  ಸಿಮೆಂಟಮ್ ಎಂಬ ಹೆಸರಿನ ಲವಣ ಪದಾರ್ಥದಿಂದ ಇದರ ರಚನೆ ಆಗಿದೆ.  ಬೇರು ಭಾಗವನ್ನು ಸುತ್ತಲೂ ದಂತಪರಿವೃತ ಪೊರೆ ಆವರಿಸಿದೆ.  ಹಲ್ಲಿನ ಒಳಗೆ ಮೃದುವಾದ ನರ ರಕ್ತನಾಳಗಳಿಂದ ಕೂಡಿರುವ ಮಜ್ಜೆ ಉಂಟು.  ಇದನ್ನು ಡೆಂಟಿನ್ ಎಂಬ ಪದಾರ್ಥ ಆವರಿಸಿದೆ.  ಡೆಂಟಿನ್ ಮತ್ತು ಮಜ್ಜೆಯ ಮೂಲಕ ಹಲ್ಲುನೋವಿನ ಅನುಭವ ನಮಗೆ ಆಗುವುದು.

ಹಾಲು ಹಲ್ಲುಗಳು :  ಪ್ರಕೃತಿ ನಮಗೆ ಎರಡು ಬಗೆಯ ಹಲ್ಲುಗಳನ್ನು ಕೊಟ್ಟಿದೆ. - ಹಾಲು ಹಲ್ಲುಗಳು ಮತ್ತು ಶಾಶ್ವತ ಹಲ್ಲುಗಳು.  ಮಗುವಿಗೆ ಎಂಟು ತಿಂಗಳು ವಯಸ್ಸು ತುಂಬುವಾಗ ಹಾಲು ಹಲ್ಲುಗಳು ಹುಟ್ಟತೊಡಗಿ ಮೂರು ವರ್ಷವಾಗುವ ಹೊತ್ತಿಗೆ ಮೇಲು ದವಡೆಯಲ್ಲಿ 10, ಕೆಳದವಡೆಯಲ್ಲಿ 10 ರಂತೆ ಒಟ್ಟು 20 ಹಲ್ಲುಗಳು ಬಂದಿರುತ್ತವೆ.  ಮುಂದೆ ಆರು ಯಾ ಏಳನೆಯ ವಯಸ್ಸಿನಲ್ಲಿ ಇವು ಒಂದೊಂದಾಗಿ ಉದುರಿಹೋಗಿ ಆ ಎಡೆಗಳಲ್ಲಿ ಶಾಶ್ವತ ಹಲ್ಲುಗಳು ಹುಟ್ಟುವುವು.  ಮೊದಲಿನವು ಯಾವುದೇ ಕಾರಣದಿಂದ ಸಕಾಲದಲ್ಲಿ ಬೀಳದಿದ್ದರೆ ಎರಡನೆಯ ಹಲ್ಲುಗಳಿಗೆ ಸರಿಯಾಗಿ ಬೆಳೆಯಲು ಅವಕಾಶ ಒದಗದೇ ವಕ್ರತೆ ತಲೆದೋರುವುದು ಅಪರೂಪವೇನಲ್ಲ.

ಶಾಶ್ವತ ಹಲ್ಲುಗಳು : ಮನುಷ್ಯನ ಬಾಯಿಯಲ್ಲಿ ಮೂಡಬರುವ ಪ್ರಥಮ ಶಾಶ್ವತ ಹಲ್ಲು ಕಡೆಬಾಯಿಯ ಅರೆಯುವ ಹಲ್ಲು. ಆರನೆಯ ವಯಸ್ಸಿನಲ್ಲಿ ಸಾಧಾರಣವಾಗಿ ಇದು ಹೊರಬರಲು ತೊಡಗುತ್ತದೆ.  ವಯಸ್ಸು ಹನ್ನೆರಡು ತುಂಬುವ ವೇಳೆಗೆ ಬಾಯಿಯಲ್ಲಿ 28 ಶಾಶ್ವತ ಹಲ್ಲುಗಳು (ಮೇಲುದವಡೆಯಲ್ಲಿ 14, ಕೆಳದವಡೆಯಲ್ಲಿ 14) ಬೆಳೆದಿರುವುವು.  ಮುಂದೆ ಹದಿನೆಂಟು - ಇಪ್ಪತ್ತು ವಯಸ್ಸು ಆಗುವಾಗ ಮೂಡಿ ಬರುವವು ವಿವೇಕದ ಹಲ್ಲುಗಳು.  ಇವುಗಳ ಸಂಖ್ಯೆ 4.(ವಿಸ್‍ಡಂಟೀತ್)
ಹಲ್ಲಿನ ರೋಗಗಳು :  ಎರಡು ಬಗೆಗಳಿವೆ.  ದೇಹದ ಇತರ ಭಾಗಗಳಲ್ಲಿ ಪ್ರಕಟವಾಗಿ ಹಲ್ಲುಗಳ ಮೇಲೆ ಪರಿಣಾಮಗಳನ್ನು ಬೀರುವುವು ಒಂದು ಬಗೆಯವಾದರೆ ಹಲ್ಲುಗಳಿಗೇ ನೇರ ತಗಲಿ ಅವನ್ನು ಕೆಡಿಸಿ ಇತರ ಭಾಗಗಳ ಮೇಲೆ ಪರಿಣಾಮಗಳನ್ನು ಬೀರುವುವು ಎರಡನೆಯ ಬಗೆಯವು.  ಹಲ್ಲು ಹಾಗೂ ವಸಡುಗಳಿಗೆ ತಗಲುವ ರೋಗ ಮತ್ತು ನ್ಯೂನತೆಗಳನ್ನು ಜಾಗತಿಕ ಆರೋಗ್ಯ ಸಂಸ್ಥೆಯ ತಜ್ಞರು ಐದು ವಿಧವಾಗಿ ಪರಿಗಣಿಸಿರುವರು.  ಅವನ್ನು ಕ್ರಮಶ: ವಿವರಿಸಿದೆ.

1.  ಹಲ್ಲಿನ ಹುಳುಕು :  ಹಾಲು ಹಲ್ಲು, ಶಾಶ್ವತ ಹಲ್ಲುಗಳೆರಡಕ್ಕೂ ತಗಲಿ ದಂತವಜ್ರ ಮತ್ತು ದಂತಮಜ್ಜೆಗಳನ್ನು ನಾಶಪಡಿಸುವ ವ್ಯಾಪಕ ರೋಗವಿದು.  ನಾಗರಿಕತೆಯ ಪ್ರಭಾವದಿಂದ ಆಹಾರ ಪಾನೀಯಗಳಲ್ಲಿ ಹೆಚ್ಚು ಹೆಚ್ಚು ಕೃತಕತೆ ತಲೆದೋರಿರುವುದರ ಫಲ ಈ ರೋಗ. ಹಲ್ಲುಗಳ ಸೆರೆಗಳಲ್ಲಿ ಉಳಿಯುವ ಪಿಷ್ಟ ಪದಾರ್ಥಗಳು ಜೀವಾಣುಕ್ರಿಯೆಯಿಂದ ಕಿಣ್ವನಗೊಂಡಾಗ ಉಂಟಾಗುವ ಆಮ್ಲದ ಕೊರೆತವೇ ಹುಳುಕಿನ ಕಾರಣ.  ಅಲ್ಲಿ ಇಲ್ಲಿ ನಡೆಸಿದ ಯಾದೃಚ್ಛಿಕ ಸಮೀಕ್ಷೆಗಳಿಂದ ತಿಳಿದಿರುವ ಸಂಗತಿ ಎಂದರೆ ಭಾರತೀಯ ಪೈಕಿ 60%-70% ಈ ರೋಗದಿಂದ ಪೀಡಿತರಾಗಿದ್ದರೆ ಪಾಶ್ಚಾತ್ಯರಲ್ಲಿ 95% ಮಂದಿಯೂ ಇದರಿಂದ ನರಳುತ್ತಿದ್ದಾರೆ.  ಪ್ರಾರಂಭಿಕ ಹಂತದಲ್ಲಿ ಇದರ ಚಿಕಿತ್ಸೆ ಸುಲಭ.  ನೋವು ತೋರಿಬಂದ ಮೇಲೆ ಕಷ್ಟ.  ದಂತವೈದ್ಯರು ಹುಳುಕು ಭಾಗಗಳನ್ನು ಕೆರೆದು ಮತ್ತು ಕೊರೆದು ತೆಗೆದು ಔಷಧಿ ಲೇಪಿಸಿ ಸೂಕ್ತ ಪದಾರ್ಥಗಳಿಂದ ಆ ಜಾಗವನ್ನು ತುಂಬುತ್ತಾರೆ. ಬೇರುನಾಳ ಚಿಕಿತ್ಸೆಯಿಂದ ಹುಳುಕು ಹಲ್ಲನ್ನು ಉಳಿಸಿಕೊಳ್ಳಬಹುದು. ಹಲ್ಲಿನ ಹುಳುಕು ಭಾಗ ಒಂದು ಮಿತಿಯನ್ನು ಮೀರಿದ ಮೇಲೆ ಆ ಹಲ್ಲನ್ನು ಕಿತ್ತು ಕೃತಕ ಹಲ್ಲನ್ನು ಜೋಡಿಸುವುದೊಂದೇ ಲಭ್ಯ ಮಾರ್ಗ.

2.  ವಸಡಿಗೆ ತಗಲುವ ರೋಗಗಳು :  ಪಯೋರಿಯಾ ಎಂಬ ಹೆಸರಿನ ರೋಗ ವಸಡಿಗೆ ತಾಗಿ ಊತ ಮತ್ತು ನೋವನ್ನು ಉಂಟುಮಾಡುತ್ತದೆ.  ಒಟ್ಟಾರೆ, ಆರೋಗ್ಯದ ಮೇಲೂ ಇದರ ದುಷ್ಪರಿಣಾಮ ಉಂಟು.  ಈ ರೋಗದ ಪ್ರಾರಂಭಿಕ ಸ್ಥಿತಿಯಲ್ಲಿ ವಸಡಿನ ಅಂಚು ಕೆಂಪಗಾಗಿ ಊದಿ ಹಲ್ಲು ಉಜ್ಜುವಾಗ ರಕ್ತಸ್ರಾವ ಆಗುತ್ತದೆ.  ಹಲ್ಲಿನ ಸುತ್ತಲೂ ಮಲವಸ್ತು ಮತ್ತು ದಂತಕೊಳೆ ಶೇಖರಗೊಂಡು ಹಲ್ಲುಗಳ ಆಧಾರವಾದ ಎಲುಬಿನ ಆವರಣ ನಷ್ಟವಾಗುತ್ತದೆ.  ಮುಂದೆ ರೋಗ ಹಲ್ಲುಬೇರಿನ ಸುತ್ತು ಪೊರೆಯನ್ನು ಆವರಿಸಿದಾಗ ಹಲ್ಲು ಅಲ್ಲಾಡಲು ತೊಡಗುತ್ತದೆ.  ಆಹಾರವನ್ನು ಅಗಿಯುವಾಗ ಬಲು ನೋವಾಗುತ್ತದೆ.  ಬಾಯಿ ಮತ್ತು ಹಲ್ಲುಗಳು ಬಲು ಶುಚಿಯಾಗಿ ಇರಿಸಿ ಹಾಗೂ ಮುಖ್ಯವಾಗಿ ವೈಟಮಿನ್ ಸಿ ಯುಕ್ತವಾದ ಪೌಷ್ಟಿಕಾಂಶ ಉಳ್ಳ ಆಹಾರವನ್ನು ಸೇವಿಸಿ ಪಯೋರಿಯಾವನ್ನು ತಡೆಗಟ್ಟಬಹುದು.  ಮತ್ತೆ ಹಲ್ಲುಗಳ ಮೇಲೆ ಶೇಖರಗೊಳ್ಳುವ ಮಲ ಪದಾರ್ಥಗಳನ್ನು ದಂತವೈದ್ಯರ ನೆರವಿನಿಂದ ಪದೆ ಪದೇ ಶುಚಿಗೊಳಿಸುತ್ತಿರಬೇಕು.  

3.  ದಂತವಕ್ರತೆ :  ಇದೊಂದು ನ್ಯೂನತೆ.  70% ರಷ್ಟು ಮಂದಿಯಲ್ಲಿ ಇದನ್ನು ಕಾಣಬಹುದು. ಬಾಯಿಯನ್ನು ಮುಚ್ಚಿದಾಗ ಮೇಲು ಸಾಲಿನ ಮತ್ತು ಕೆಳ ಸಾಲಿನ ಹಲ್ಲುಗಳು ಪರಸ್ಪರ ಸರಿಯಾಗಿ ಹೊಂದಿಕೊಂಡು ಮುಖಕ್ಕೆ ಅಂದವನ್ನು ಕೊಡುವಂತೆ ಇರಬೇಕು.  ಹೀಗಾಗದಿದ್ದರೆ ದಂತವಕ್ರತೆ ಇದೆಯೆಂದು ಅರ್ಥ.  ಬಾಯಿಯ ಮುಂಭಾಗದಲ್ಲಿ ಎದುರಿನ ಹಲ್ಲುಗಳು ಉಬ್ಬಿ ಮುಂಚಾಚಿಕೊಂಡಿರುವ ನ್ಯೂನತೆ ಸಾಕಷ್ಟು ವ್ಯಾಪಕವಾಗಿದೆ.  ದಂತವಕ್ರತೆಯು ಆನುವಂಶಿಕವಾಗಿ ಕಂಡು ಬರಬಹುದು.  ಚಿಕ್ಕ ದವಡೆಯ ಎಲುಬಿನಲ್ಲಿ ದೊಡ್ಡ ಗಾತ್ರದ ಹಲ್ಲು ಬರುವುದು ಇದರ ಲಕ್ಷಣ.  ಅರ್ಜಿತ ಅಭ್ಯಾಸದಿಂದಲೂ ದಂತವಕ್ರತೆ ತಲೆದೋರಬಹುದು.  ಉದಾಹರಣೆಗೆ ಬೆಟ್ಟು ಚೀಪುವ ಅಥವಾ ಪೆನ್ಸಿಲ್ ಮೊದಲಾದ ಗಟ್ಟಿ ವಸ್ತುಗಳನ್ನು ಜಗಿಯುವ ಅಭ್ಯಾಸದಿಂದ ಮಕ್ಕಳ ಬಲು ಮೃದು ಬೋಡುಗಳಲ್ಲಿ ವಿಕಲತೆ ಉಂಟಾಗಿ ಮುಂದೆ ದಂತವಕ್ರತೆ ಪರಿಣಮಿಸುವುದು ಸಾಧ್ಯವಿದೆ.  ಹಾಲುಹಲ್ಲುಗಳು ಅವುಗಳ ಪೂರ್ಣಾವಧಿ ತನಕ ಇರಬೇಕು ಮತ್ತು ಯುಕ್ತ ವೇಳೆಯಲ್ಲಿ ಉದುರಿ ಹೋಗಬೇಕು ಇದು - ನಡೆಯದಿದ್ದರೆ ಶಾಶ್ವತ ಹಲ್ಲುಗಳ ಹುಟ್ಟು ಮತ್ತು ಬೆಳೆವಣಿಗೆಗೆ ಅಡಚಣೆ ಉಂಟಾಗಿ ವಕ್ರದಂತ ಪಂಕ್ತಿ ಹುಟ್ಟುತ್ತದೆ.  ಒಮ್ಮೆ ಬಂದ ಶಾಶ್ವತ ಹಲ್ಲುಗಳು ಯಾವುದೇ ಕಾರಣ್ಕಕೆ ಚಿಕ್ಕ ವಯಸ್ಸಿನಲ್ಲಿ ವಿನಷ್ಟಗೊಂಡರೆ ಉಳಿದವುಗಳ ಸ್ಥಾನಗಳಲ್ಲಿ ಬದಲಾವಣೆಯಾಗಿ ದಂತವಕ್ರತೆ ತಲೆದೋರಬಹುದು.

4. ಆಜನ್ಮ ದಂತರೋಗಗಳು :  ಭ್ರೂಣದ ಬೆಳೆವಣಿಗೆಯ ದಿವಸಗಳಲ್ಲಿ ಬಾಯಿ ತುಟಿ ಮುಂತಾದೆಡೆಗಳಲ್ಲಿ ಹಲವಾರು ಅರೆಕೊರೆಗಳು ತಲೆದೋರುವುದುಂಟು. ಉದಾಹರಣೆಗೆ ಸೀಳು ಅಂಗುಳು, ಸೀಳು ತುಟಿ ಮುಂತಾದವು.  ಈ ತರಹದ ನ್ಯೂನತೆ ಇರುವ ಮಕ್ಕಳಿಗೆ ಮುಂದೆ ಹಲ್ಲು ಬರುವಾಗ ಸಹಜವಾಗಿ ವಕ್ರತೆ ಇದ್ದೇ ಇರುತ್ತದೆ.

5.  ಬಾಯಿ ಏಡಿಗಂತಿ :  ತೀಕ್ಷ್ಣವಾದ ಹಲ್ಲುಸರಿ (ಟೂತ್ ಪೇಸ್ಟ್) ಮತ್ತು ಬಿರುಸಾದ ಹಲ್ಲುಕುಂಚದಿಂದ (ಟೂತ್ ಬ್ರಷ್) ದೀರ್ಘಕಾಲ ಹಲ್ಲುಗಳನ್ನು ಗಸಗಸನೆ  ಉಜ್ಜುವುದರಿಂದ ಬಾಯಿ, ತುಟಿ, ನಾಲಗೆಗಳಲ್ಲಿ ಕ್ರಮೇಣ ವೃಣಗಳು ಕಾಣಿಸಿಕೊಳ್ಳುವುದುಂಟು.  ಕ್ಷಾರ ಪದಾರ್ಥಗಳ ದೀರ್ಘ ಸೇವನೆಯಿಂದ ಮತ್ತು ಇತರ ಕಾರಣಗಳಿಂದಲೂ ಬಾಯಿ ಏಡಿಗಂತಿ ಬರುವುದು.  ಪಯೋರಿಯಾದಂತೆ ಇದು ಕೂಡ ವಯಸ್ಕರ ರೋಗವೇ.  ಪ್ರಾರಂಭದ ದಿವಸಗಳಲ್ಲಿ ಬಾಯಿ ಏಡಿಗಂತಿಯನ್ನು ಕೂಡ ಗುಣಪಡಿಸುವುದು ಸಾಧ್ಯವಾದೀತು.

ಈ ಮೇಲೆ ಗುರುತಿಸಿದ ಐದು ಸ್ಪಷ್ಟ ರೋಗಗಳಲ್ಲದೇ ಹಲ್ಲು ಸವೆತ ಮತ್ತು ಫ್ಲೂರೋಸಿಸ್ ಎಂಬವನ್ನು ಕೂಡ ಇಲ್ಲಿ ಹೆಸರಿಸಬೇಕು.  

ಹಲ್ಲು ಸವೆತ :  ಹಲ್ಲುಗಳ ಪರಸ್ಪರ ತಿಕ್ಕಾಟ ಫಲವಿದು.  ಒರಟಾದ ಆಹಾರದ ಅತಿಸೇವನೆ, ಉದ್ವೇಗದ ಪರಿಣಾಮವಾಗಿ ಹಲ್ಲುಗಳನ್ನು ಕಟಕಟನೆ ಕಡಿಯುವುದು, ಕ್ಷಾರ ಆಮ್ಲ ಕಟು ಅತಿ ಬಿಸಿ ತಂಪು ಮುಂತಾದ ಕೊರೆವ ಆಹಾರ ಪದಾರ್ಥಗಳ ಸೇವನೆ, ಬಿರುಸಾದ ಹಲ್ಲು ಕುಂಚದಿಂದ ತಿಕ್ಕುವುದು ಇವು ಕೂಡ ಹಲ್ಲಿನ ಸವೆತಕ್ಕೆ ಕಾರಣವಾಗುತ್ತದೆ.  ಇದರಿಂದ ಹಲ್ಲಿನ ಉಪಯುಕ್ತತೆ ಹಾಗೂ ಆಯುಷ್ಯ ಕಡಿಮೆ ಆಗುವುದು.

ಫ್ಲೂರೋಸಿಸ್ :  ಫ್ಲೋರೈಡುಗಳ ಅತಿಸೇವನೆಯಿಂದ ಬೆಳೆವಣಿಗೆಯ ಕಾಲದಲ್ಲಿ ಹಲ್ಲುಗಳ ರಚನೆಯಲ್ಲಿ ದೋಷಗಳು ಅಡಕವಾಗಿ ಜೀವಮಾನವಿಡೀ ಅವುಗಳ ಅಂದವನ್ನು ಕೆಡಿಸಬಹುದು.  ಐದು ಲಕ್ಷ ಭಾಗಗಳಲ್ಲಿ  ಒಂದು ಭಾಗದಷ್ಟು ಫ್ಲೂರೈಡ್ ಲವಣಗಳು ನೀರಿನಲ್ಲಿ ಯಾ ಆಹಾರದಲ್ಲಿ ಇದ್ದರೆ ಅದರ ಪರಿಣಾಮ ಅತ್ಯುತ್ತಮ.  ಇಂಥ ಹಲ್ಲುಗಳು ಗಟ್ಟಿಯಾಗಿಯೂ ಅಂದವಾಗಿಯೂ ಇರುವುವು. ಇವು ಹುಳುಕು ರೋಗವನ್ನು ತಡೆಯಬಲ್ಲವು.  ಅಂದಮಾತ್ರಕ್ಕೆ ಫ್ಲೂರೈಡ್ ಲವಣಗಳ ಪ್ರಮಾಣವೇನಾದರೂ ಹೆಚ್ಚಾದರೆ ಅವು ವಿಷವಾಗಿ ಪರಿಣಮಿಸುತ್ತವೆ.  ಆಗ ಹಲ್ಲಿನ ನರ ರಚನೆ, ಆಕಾರ, ಎಲ್ಲವುಗಳಲ್ಲೂ ಊನ ಕಂಡುಬರಬಹುದು. ದಂತವಜ್ರಗಳಲ್ಲಿ ಕಂಡುಬರುವ ಬಿಳಿ, ಬೂದು, ಕಂದು ಬಣ್ಣಗಳ ತೇಪೆಗಳು ಫ್ಲೂರೋಸಿಸ್ ಪರಿಣಾಮದಿಂದ ಆದವು.  ಕುಡಿಯುವ ನೀರಿನಲ್ಲಿ ಫ್ಲೂರೈಡ್ ಇಲ್ಲದ ಪ್ರದೇಶಗಳಲ್ಲಿ ಯುಕ್ತ ಪ್ರಮಾಣದಲ್ಲಿ ಅದನ್ನು ಬೆರೆಸಿದಾಗ ಹುಳುಕು ಹಲ್ಲು ರೋಗದ ಪಸರಿಕೆಯಲ್ಲಿ ಇಳಿಕೆ (50%) ಕಂಡುಬಂತು.

ಬಾಯಿ ಮತ್ತು ಹಲ್ಲುಗಳ ಆರೋಗ್ಯವನ್ನು ದೇಹಾರೋಗ್ಯದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ.  ಬಾಯಿಯೇ ದೇಹಕ್ಕೆ (ಆಹಾರದ) ಪ್ರವೇಶದ್ವಾರವಾದ್ದರಿಂದ ಇದರ ಸಾರ್ವಕಾಲಿಕ ಶುಚಿತ್ವದಿಂದ ದೇಹಾರೋಗ್ಯ ತುಂಬ ಮೇಲುಮಟ್ಟದಲ್ಲಿ ಇರುವುದೆನ್ನುವುದು ನಿಸ್ಸಂದೇಹ. ದಂತರೋಗಗಳು ಬಾರದಂತೆ ಹಲವಾರು ಸುಲಭವಾದ ಮುನ್ನೆಚ್ಚರಿಕೆ ಅನುಸರಿಸಬೇಕು.  ಪ್ರತಿ ಸಲವೂ ಆಹಾರ ಸೇವನಾನಂತರ ಹಲ್ಲುಬಾಯಿಗಳನ್ನು ಶುಚಿಗೊಳಿಸುವುದು ಮೊದಲ ಕರ್ತವ್ಯ.  ಹಲ್ಲುಗಳ ಸಂದಿಗಳಲ್ಲಿ ಹಾಗೂ ಕುಹರಗಳಲ್ಲಿ ಸಿಕ್ಕಿಹಾಕಿಕೊಂಡಿರುವ ತುಣುಕುಗಳನ್ನು ಆಗಾಗಲೇ ತೆಗೆದುಹಾಕುವುದು ತುಂಬ ಶ್ರೇಯಸ್ಕರ.  ಆದರೆÀ ಹೀಗೆ ಅವನ್ನು ತೆಗೆಯಲು ಒಕ್ಕಲು ಚೂಪಾದ ಕಡ್ಡಿಗಳನ್ನಾಗಲಿ ಹರಿತವಾದ ಸೂಜಿಗಳನ್ನಾಗಲಿ ಬಳಸುವುದು ಎಂದೂ ಒಳ್ಳೆಯದಲ್ಲ.  ರಾತ್ರಿ ಮಲಗುವ ಮೊದಲು ಕಡ್ಡಾಯವಾಗಿ ಹಲ್ಲುಗಳನ್ನು ಹಲ್ಲು ಸರಿ, ಹಲ್ಲು ಕುಂಚಗಳ ಉಪಯೋಗದಿಂದ ಚೊಕ್ಕಟವಾಗಿಸಬೇಕು.  ಗರ್ಭಿಣಿ ಸ್ತ್ರೀಯರಿಗೆ ಯೋಗ್ಯ ಪೌಷ್ಟಿಕಾಹಾರಗಳನ್ನು ಒದಗಿಸಿ ಭ್ರೂಣದ ಸಾರ್ವತ್ರಿಕ ಬೆಳೆÀವಣಿಗೆಗೆ ಅವಕಾಶ ಮಾಡಬೇಕು.  ಸಿಹಿ ತಿಂಡಿಗಳು, ಬಿಸ್ಕತ್ತು, ಚಾಕೊಲೇಟ್ ಮುಂತಾದವು ಖಂಡಿತವಾಗಿಯೂ ಮಕ್ಕಳ ಹಲ್ಲುಗಳ ಬೆಳೆವಣಿಗೆಗಾಗಲಿ ಆರೋಗ್ಯಕ್ಕಾಗಲಿ ಹಿತಕರವಲ್ಲ.  ಅವಶ್ಯವೂ ಅಲ್ಲ.  ದಂತ ವೈದ್ಯರ ಸಲಹೆ ಚಿಕಿತ್ಸೆಗಳನ್ನು ಕಾಲಕಾಲಕ್ಕೆ ಪಡೆಯುವುದು ಅಪೇಕ್ಷಣೀಯ.	(ಬಿ. ಎಸ್. ಕೆ. ಎಸ್.)

ಹಲ್ಲುಗಳ ಅಂಗರಚನೆ :  ಮಾನವರಲ್ಲಿ ಬಾಲ್ಯದ ಹಲ್ಲುಗಳು ಒಟ್ಟು 20 (ಹಾಲು ಹಲ್ಲುಗಳು) ಮತ್ತು ಪ್ರೌಢವಯಸ್ಸಿನಲ್ಲಿ 32 (ಸ್ಥಿರ ಹಲ್ಲುಗಳು) ಎಂದು ಈಗಾಗಲೇ ಹೇಳಿದೆ.  ವಯಸ್ಸಿನಲ್ಲಿ ಇವುಗಳ ವಿನ್ಯಾಸ ಹೀಗೆ :  ಪ್ರತಿ ದವಡೆಯಲ್ಲಿ ಎಡಬಲಗಡೆಗಳಲ್ಲಿ ಸಮವಾಗಿ ಮುಂದಿನಿಂದ ದವಡೆಯ ಮೂಲೆಯ ವರೆಗೆ ಕಾಣಬರುವಂತೆ 2 ಭೇದಕಗಳು ಮುಂದಿನ ಕತ್ತರಿಸುವ ಹಲ್ಲುಗಳು (ಬಾಚಿಹಲ್ಲು), 2  ಮುಂದಿನ ಅರೆಯುವ ಹಲ್ಲುಗಳು ಮತ್ತು 3 ಹಿಂದಿನ ಅರೆಯುವ (ದವಡೆ) ಹಲ್ಲುಗಳು.  ಬಾಲ್ಯದಲ್ಲಿ 2 ದವಡೆ ಹಲ್ಲುಗಳು ಮಾತ್ರ ಇರುತ್ತವೆ.  ಇವು ವಯಸ್ಕರ ಸಣ್ಣ ಅರೆಯುವ ಹಲ್ಲುಗಳಿಗೆ ಸಮಾನವಾದವು. ಬಾಲ್ಯದಂತಸೂತ್ರ 212/112. ಅಂದರೆ ಪ್ರತಿ ಪಾಶ್ರ್ವದಲಿ 2 ಮೇಲಿನ ಮತ್ತು 2 ಕೆಳಗಿನ ಛೇದಕಗಳು. 1 ಮೇಲಿನ ಮತ್ತು 1 ಕೆಳಗಿನ ಕೋರೆಗಳು, 2 ಮೇಲಿನ ಮತ್ತು 2 ಕೆಳಗಿನ ಅರೆಯುವ ಹಲ್ಲುಗಳು ಎಂದರ್ಥ.  ಪ್ರೌಢ ಅಥವಾ ಸ್ಥಿರ ದಂತಸೂತ್ರ 2123/2123.  ಹಲ್ಲುಗಳ ಸಾಲುಗಳು ಕಮಾನಿನಂತೆ ಇವೆ. ಕೆಳದಂತ ಪಂಕ್ತಿ ಮೇಲಿನ ದಂತಪಂಕ್ತಿಯೊಳಕ್ಕೆ ಸೇರುತ್ತದೆ.

ಹಲ್ಲಿನ ಭಾಗಗಳು :  ಹೊರ ಕಾಣುವ ಭಾಗ ದಂತಶಿರ.  ಇದರ ಮೇಲೆ ಬೆಳ್ಳಗೆ ಹೊಳೆಯುವ ಮತ್ತು ಪ್ರಾಣಿಜನ್ಯ ಪದಾರ್ಥಗಳಲ್ಲೆಲ್ಲ ಬಲುಗಟ್ಟಿಯಾದ ದಂತವಜ್ರ ಎಂಬ ಕವಚವಿದೆ.  ದವಡೆ ಮೂಳೆಯ ಕುಳಿಯಲ್ಲಿ  ಹುದುಗಿರುವ ಭಾಗ ದಂತಮೂಲ (ಹಲ್ಲಿನ ಬೇರು). ಮೇಲಿನ ದೊಡ್ಡ ದವಡೆ ಹಲ್ಲುಗಳಿಗೆ 3 ಬೇರುಗಳಿವೆ. ಮಿಕ್ಕ ಹಲ್ಲುಗಳಿಗೆ ಎರಡಿವೆ.  ಸಣ್ಣ ಅರೆಯುವ ದಂತಗ್ರೀವ (ಹಲ್ಲಿನ ಕಂಠ) ಶಿರ ಮತ್ತು ಮೂಲಗಳಲ್ಲಿರುವ ಪೊಳ್ಳು. ಇದರಲ್ಲಿ ರಕ್ತ ನಾಳಗಳು ಮತ್ತು ನರಗಳಿವೆ. ನರಗಳ ಪೂರೈಕೆ ಆಗಿರುವುದರಿಂದ ಒತ್ತಡ, ಶೈತ್ಯೋಷ್ಣಗÀಳು ನೋವು ಎಂಬೀ ಸಂವೇದನೆಗಳು ಹಲ್ಲಿಗೆ ಲಭ್ಯವಾಗಿವೆ.  ಹಲ್ಲು ಪೊರೆ (ಸುತ್ತುಪೊರೆ) ಬೇರಿಗೂ ಕುಳಿಗೂ ನಡುವೆ ಇದ್ದು ಹಲ್ಲು ಕುಳಿಯಲ್ಲಿ ಬಿಗಿಯಾಗಿ ಸಿಕ್ಕಿಕೊಂಡಿರುವಂತೆ ಮಾಡುವ ನಾರಿನ ಪೊರೆ.  ಏಟು ಬಿದ್ದರೆ ಸಾಮಾನ್ಯವಾಗಿ ಹಲ್ಲು ಮೊದಲು ಮುರಿದು ಹೋಗುತ್ತದೆ.  ಏಟು ಬಲು ತೀವ್ರವಾಗಿದ್ದರೆ ಮಾತ್ರ ಕುಳಿಯಿಂದ ಕಳಚಿ ಬೀಳಬಹುದು.  ದಂತದ ಮುಖ್ಯ ವಸ್ತುವಿನಲ್ಲಿ ಜೀವವಿಲ್ಲ. ಇದು ದಂತದ ಶಿರ ಮತ್ತು ಮೂಲ ಭಾಗಗಳೆರಡರಲ್ಲೂ ಇದೆ. ಮೂಲಭಾಗದಲ್ಲಿ ದಂತವಸ್ತುವಿನ ಸುತ್ತ ದಂತಪ್ರಸ್ತರವಿದೆ. ಎಲುಬು ವಸ್ತುವಿನಿಂದಾದ ಇದು ದಂತಶಿರದಲ್ಲಿರುವ ದಂತವಜ್ರಕ್ಕೆ  ಸರಿಸಮಾನವಾಗಿರುವ ಕವಚ.  ಇದಕ್ಕೆ ಹಲ್ಲುಪೊರೆ ಅಂಟಿಕೊಂಡಿದೆ.
ಬಾಲ್ಯದಲ್ಲಿ ಹಲ್ಲು ಹುಟ್ಟುವ ಕಾಲಗಳು

ಕೆಳಗಿನ ಮಧ್ಯ ಛೇದಕಗಳು 	    .....	6-9 ತಿಂಗಳಾಗುವಾಗ
ಮೇಲಿನ ಛೇದಕಗಳು 	    .....	8 ರಿಂದ 10 ತಿಂಗಳುಗಳಲ್ಲಿ
ಪಕ್ಕ ಛೇದಕ ಮತ್ತು ಮುಂದಿನ ದವಡೆ ಹಲ್ಲು	.....	15 ರಿಂದ 21 ತಿಂಗಳುಗಳಲ್ಲಿ
ಕೋರೆಗಳು 	   .....	16 ರಿಂದ 20 ತಿಂಗಳುಗಳಲ್ಲಿ
ಹಿಂದಿನ ದವಡೆ ಹಲ್ಲುಗಳು	   .....	20  ರಿಂದ 24 ತಿಂಗಳುಗಳಲ್ಲಿ
ಹೋಲ್ಟ್ ಎಂಬಾತನ ಪ್ರಕಾರ 1 ವರ್ಷ ವಯಸ್ಸಿನಲ್ಲಿ 6 ಹಲ್ಲುಗಳೂ 1 1/2 ವರ್ಷದಲ್ಲಿ 12, 2 ವರ್ಷದಲ್ಲಿ 16 ಮತ್ತು 2

 1/2  ವರ್ಷದಲ್ಲಿ 20 ಹಲ್ಲುಗಳೂ ಇರಬೇಕು.  ಆರೋಗ್ಯ ಮತ್ತು ಆಹಾರ ಕಡಿಮೆ ಇದ್ದರೆ ಹಲ್ಲು ಹುಟ್ಟುವುದು ತಡವಾಗಬಹುದು.  ಬಾಲ್ಯದ ಛೇದಕಗಳು 7-8 ನೆಯ ವಯಸ್ಸಿನಲ್ಲಿ ಬಿದ್ದು ಹೋಗುತ್ತವೆ.  ಮುಂದೆ ಬಾಲ್ಯದ ದವಡೆ ಹಲ್ಲುಗಳು 9-10 ನೆಯ ವಯಸ್ಸಿನಲ್ಲಿ ಕೋರೆಹಲ್ಲುಗಳು 11 ರಿಂದ 12 ನೆಯ ವಯಸ್ಸಿನಲ್ಲಿ ಬೀಳುತ್ತವೆ.  ಇವು ಬಿದ್ದು ಖಾಲಿ ಆದ ಕುಳಿಗಳಲ್ಲಿ ಒಂದೆರಡು ತಿಂಗಳುಗಳಲ್ಲೇ ಸ್ಥಿರ ಹಲ್ಲುಗಳು ಮೊಳೆತು ಬೆಳೆಯುತ್ತವೆ.  ಈ ಕ್ರಮದಲ್ಲಿ ಧಕ್ಕೆಯಾಗದೇ ಸ್ಥಿರ ಹಲ್ಲುಗಳ ವಕ್ರತೆ ಉಂಟಾಗುತ್ತದೆ.

ವಯಸ್ಕರ ಹಲ್ಲು ಹುಟ್ಟುವ ಕಾಲಗಳು
ಮೊದಲನೆಯ ಹಿಂದಿನ  ಅರೆಯುವ ಹಲ್ಲು		......	6 ವರ್ಷಗಳಲ್ಲಿ
ಮಧ್ಯ ಛೇದಕಗಳು 		......	7 ವರ್ಷಗಳಲ್ಲಿ
ಪಕ್ಕ ಛೇದಕಗಳು 		......	8 ವರ್ಷಗಳಲ್ಲಿ
ಮೊದಲನೆಯ ಮುಂದಿನ ಅರೆಯುವ ಹಲ್ಲುಗಳು	......	9 ವರ್ಷಗಳಲ್ಲಿ
ಎರಡನೆಯ ಮುಂದಿನ ಸಣ್ಣ ಅರೆಯುವ ಹಲ್ಲುಗಳು	......	10 ವರ್ಷಗಳಲ್ಲಿ
ಕೋರೆಗಳು		......	11 ರಿಂದ 12 ವರ್ಷಗಳಲ್ಲಿ
ಎರಡನೆಯ ಹಿಂದಿನ ಅರೆಯುವ ಹಲ್ಲುಗಳು 	......	12 ರಿಂದ 13 ವರ್ಷಗಳಲ್ಲಿ
ಮೂರನೆಯ ಹಿಂದಿನ ಅರೆಯುವ ಹಲ್ಲುಗಳು	......	17 ರಿಂದ 25 ವರ್ಷಗಳಲ್ಲಿ

ಕೆಳಹಲ್ಲುಗಳು ಮೇಲಿನ ಹಲ್ಲುಗಳಿಗಿಂತ ಸ್ವಲ್ಪ ಮುಂಚೆ ಹುಟ್ಟುತ್ತವೆ. ಆರನೆಯ ವರ್ಷದಲ್ಲಿ ಪ್ರತಿ ದವಡೆಯಲ್ಲೂ 10 ಬಾಲ್ಯದ ಹಲ್ಲುಗಳು ಹೊರಗೆ ಕಾಣುವಂತೆಯೂ 14 ಸ್ಥಿರದಂತಗಳ ಶಿರಗಳು ಒಳಗೆ ಹುದುಗಿದಂತೆಯೂ ಅಂತೂ ಒಟ್ಟು 24 ಹಲ್ಲುಗಳಿರುತ್ತವೆ. ಮೂರನೆಯ ಹಿಂದಿನ ದವಡೆ ಹಲ್ಲುಗಳು ನಾಲ್ಕೂ ವಿವೇಕ ಹಲ್ಲುಗಳೆನಿಸಿಕೊಂಡಿವೆ. ಇವು 45-50 ವರ್ಷಗಳಷ್ಟು ನಿಧಾನಿಸಿ ಹುಟ್ಟಬಹುದು.  (ವ್ಯಕ್ತಿ ಬುದ್ಧಿವಂತಿಕೆಗೂ ಈ ಹಲ್ಲುಗಳಿಗೂ ಏನೇನೂ ಸಂಬಂಧವಿಲ್ಲ. ) ಅನೇಕ ವೇಳೆ ಇವುಗಳಿಗೆ ಸಾಕಷ್ಟು ಸ್ಥಳವಿಲ್ಲದೆ ಹಲ್ಲು ಹುಟ್ಟುವಾಗ ಊತ, ಜ್ವರ, ಇತ್ಯಾದಿ ಕಂಡುಬರುವುದಲ್ಲದೆ ಹಲ್ಲೂ ವಕ್ರವಾಗಿ ಅಗಿಯಲು ತೊಂದರೆಯಾಗಬಹುದು. ಬಹಳ ಅಪರೂಪವಾಗಿ ಯಾವ ಹಲ್ಲೂ ಹುಟ್ಟದೆ ಮನುಷ್ಯ ದಂತಲುಪ್ತನಾಗಿರಬಹುದು. 
ಹಲ್ಲು ಹುಟ್ಟುವ ಕಾಲಗಳು ವ್ಯಕ್ತಿಯ ವಯಸ್ಸಿನ ನಿರ್ಣಯಕ್ಕೆ ಸಹಾಯಕಾರಿಗಳು. ಹಲ್ಲುಗಳು ಚಹರೆ ಗುರ್ತುಗಳಾಗಿ ವಾರಸುದಾರರಿಲ್ಲದ ಹೆಣಗಳನ್ನು ಮತ್ತು ಅಪರಾಧಿ ಮುಂತಾದವರನ್ನು ಗೊತ್ತು ಹಚ್ಚುವುದರಲ್ಲಿ ಸಹಾಯಕಾರಿಗಳು. ಕೆಲವು ಪ್ರಾಣಿಗಳಲ್ಲಿ ಎಷ್ಟು ಸಾರಿ ಹಲ್ಲು ಬಿದ್ದರೂ ಮತ್ತೆ ಮತ್ತೆ ಹುಟ್ಟುತ್ತಲೇ ಇರುತ್ತದೆ. ಇನ್ನು ಕೆಲವರಲ್ಲಿ (ಉದಾಹರಣೆಗೆ ಮೂಷಿಕಗಳು) ಹಲ್ಲು ಸವೆದಂತೆಲ್ಲ ಬೆಳೆಯುತ್ತಲೇ ಇರುತ್ತವೆ. ಮಾನವರಂತೆಯೇ ಮಂಗಗಳಿಗೂ 32 ಹಲ್ಲುಗಳುಂಟು. 	
 									    (ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ